ಬೆಂಗಳೂರು, ಫೆಬ್ರವರಿ ೨೦:ವಿದ್ಯುತ್ ಬೇಡಿಕೆ ಪ್ರಮಾಣ ಗಗನಕ್ಕೇರುತ್ತಿರುವ ಬೆನ್ನಲ್ಲೇ ರಾಜ್ಯ ಕಗ್ಗತ್ತಲಲ್ಲಿ ಮುಳುಗುವ ಆತಂಕ ಕಂಡು ಬಂದಿದ್ದು ಇದಕ್ಕೆ ಪೂರ್ವಭಾವಿಯಾಗಿ ರಾಜ್ಯದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸುಧೀರ್ಘ ಕಾಲದ ಲೋಡ್‌ಷೆಡ್ಡಿಂಗ್‌ನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ.
ರಾಜ್ಯದಲ್ಲಿ ಬಿರುಬಿಸಿಲು ಶುರುವಾಗುತ್ತಿದ್ದಂತೆಯೇ ವಿದ್ಯುತ್ ಬೇಡಿಕೆಯ ಪ್ರಮಾಣ ತಾರಕಕ್ಕೇರಿದ್ದು ಇಷ್ಟು ಪ್ರಮಾಣದ ವಿದ್ಯುತ್‌ನ್ನು ಪೂರೈಸುವ ಮಾರ್ಗ ಕಾಣದೇ ಸರಕಾರ ಕಂಗಾಲಾಗಿದ್ದು ಈ ಹಿನ್ನೆಲೆಯಲ್ಲಿ ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಕಟ್ ಮಾಡಲು ನಿರ್ಧರಿಸಿದೆ.
ಕೆಪಿಟಿಸಿಎಲ್‌ನ ಉನ್ನತ ಮೂಲಗಳು ಈ ವಿಷಯ ತಿಳಿಸಿದ್ದು ಮುಂದಿನ ಮೂರು ತಿಂಗಳ ಕಾಲ ವಿದ್ಯುತ್ ಪೂರೈಕೆಯ ಪರಿಸ್ಥಿತಿ ಇದೇ ರೀತಿ ಇರಲಿದ್ದು ಇದನ್ನು ಪರಿಹರಿಸಲು ವರುಣನ ಕೃಪೆಯೊಂದೇ ದಾರಿ ಅನ್ನುತ್ತವೆ.
ಹಿಂಗಾರು ಮಳೆ ವಿಫಲವಾಗಿರುವುದರಿಂದ ಈ ಬಾರಿ ಮಾರ್ಚ್ ಹದಿನೈದರ ವೇಳೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ಬೀಳುತ್ತದೆ ಎಂಬ ಹವಾಮಾನ ಇಲಾಖೆ ವರದಿಯೇ ರಾಜ್ಯ ಸರ್ಕಾರದ ಪಾಲಿಗೆ ಆಶಾಗೋಪುರದಂತೆ ಕಾಣುತ್ತಿರುವುದು ನಿಜ.
ಈ ಮುನ್ನ ಈಶ್ವರಪ್ಪ ಇಂಧನ ಸಚಿವರಾಗಿದ್ದ ಕಾಲದಲ್ಲಿ ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ಭರವಸೆ ನೀಡಿದ್ದ ಸರ್ಕಾರ ಬೆಳಿಗ್ಗೆ ಹಾಗೂ ರಾತ್ರಿ ವೇಳೆ ವಿದ್ಯುತ್ ಕಡಿತ ಮಾಡದೇ ವ್ಯಾಸಂಗ ಮಾಡಲು ಅನುಕೂಲ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿತ್ತು.
ಆದರೆ ಇದೀಗ ಬೆಂಗಳೂರು ನಗರದಲ್ಲೇ ಪ್ರತಿನಿತ್ಯ ನಾಲ್ಕು ಗಂಟೆ ಕಾಲ ವಿದ್ಯುತ್ ಕಡಿತವಾಗುತ್ತಿದ್ದು ಕೆಲವು ಪ್ರದೇಶಗಳಲ್ಲಿ ದುರಸ್ಥಿಯ ನೆಪದಲ್ಲಿ ಇಡೀ ದಿನ ವಿದ್ಯುತ್ ಕಡಿತ ಮಾಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು ಜನಸಾಮಾನ್ಯರು ಸರ್ಕಾರಕ್ಕೆ ಹಿಡಿಶಾಪ ಹಾಕುವಂತಾಗಿದೆಯಲ್ಲದೇ ಕೃಷಿ ಚಟುವಟಿಕೆಗಳಿಗೂ ದೊಡ್ಡ ಪ್ರಮಾಣದಲ್ಲಿ ಅಡ್ಡಿಯಾಗತೊಡಗಿದೆ.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ೧೫೦ ದಶಲಕ್ಷ ಯುನಿಟ್‌ಗಳಷ್ಟು ವಿದ್ಯುತ್‌ಗೆ ಬೇಡಿಕೆ ಬಂದಿದೆ. ಆದರೆ ಐದು ನಿಗಮಗಳು ಕೇವಲ ೧೧೫ರಿಂದ ೧೨೦ ದಶಲಕ್ಷ ಯುನಿಟ್‌ಗಳನ್ನು ಮಾತ್ರ ಪೂರೈಕೆ ಮಾಡುತ್ತಿವೆ. ಉಳಿದ ವಿದ್ಯುತ್‌ಗಾಗಿ ಏನು ಮಾಡುವುದು ಎಂಬ ಚಿಂತೆ ಸರ್ಕಾರಕ್ಕೆ ಕಾಡುತ್ತಿದೆ.
ಈ ಮಧ್ಯೆ ಹೊರರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡಿಯಾದರೂ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಪೂರೈಸಬೇಕು ಎಂಬ ಒತ್ತಡ ಬಿಜೆಪಿ ಒಳವಲಯಗಳಿಂದಲೇ ಕೇಳಿ ಬರುತ್ತಿದೆಯಾದರೂ ಇನ್ನಷ್ಟು ವಿದ್ಯುತ್ ಖರೀದಿ ಮಾಡಲು ಸರ್ಕಾರದ ಬೊಕ್ಕಸದಲ್ಲಿ ಹಣವೇ ಇಲ್ಲ.
ಈ ಹಿಂದೆ ಇಂಧನ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ರಾಜ್ಯಕ್ಕೆ ಅಗತ್ಯವಾದ ಹೆಚ್ಚುವರಿ ವಿದ್ಯುತ್‌ನ್ನು ಪವರ್ ಎಕ್ಸ್‌ಚೇಂಜ್ ಮೂಲಕ ಖರೀದಿ ಮಾಡಬೇಕು ಎಂಬ ಪ್ರಸ್ತಾಪವನ್ನು ಸಿಎಂ ಯಡಿಯೂರಪ್ಪ ಅವರ ಮುಂದಿಟ್ಟಿದ್ದರು.
ಆದರೆ ಈ ಪ್ರಸ್ತಾಪಕ್ಕೆ ಒಪ್ಪಿಗೆ ದೊರೆಯುವ ಮುನ್ನವೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದ ಅಧ್ಯಕ್ಷ ಸ್ಥಾನದ ಹೊಣೆಗಾರಿಕೆಯನ್ನು ಹೊತ್ತಿದ್ದರು.ನಂತರ ಮುಖ್ಯಮಂತ್ರಿಗಳ ಕೈಗೆ ಈ ಖಾತೆ ಬಂದ ಮೇಲೆ ಹೊರರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡುವ ಪ್ರಸ್ತಾಪದ ಬಗ್ಗೆ ಚರ್ಚೆಯೇ ನಡೆದಿಲ್ಲ.
ಹೀಗಾಗಿ ಮಾರ್ಚ್ ಮಧ್ಯ ಭಾಗದ ವೇಳೆಗೆ ಮಳೆ ಬಾರದಿದ್ದರೆ ಬೇರೇನೂ ದಾರಿಯಿಲ್ಲ ಎಂದು ಇಂಧನ ಇಲಾಖೆ ಏನು ಮಾಡಲಾಗದು ಎಂದು ಕೈಚೆಲ್ಲಿ ಕೂತಿದೆ.ಹಾಗೇನಾದರೂ ಆದರೆ ಬರುವ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕರ್ನಾಟಕ ಕಗ್ಗತ್ತಲಲ್ಲಿ ಮುಳಗಲಿದೆ.
ಈ ಮಧ್ಯೆ ವಿದ್ಯುತ್ ಕ್ಷಾಮ ಕರ್ನಾಟಕಕ್ಕೆ ಸೀಮಿತವಾಗದೆ ದೇಶದ ಬಹುತೇಕ ರಾಜ್ಯಗಳನ್ನು ಕಾಡುತ್ತಿರುವುದರಿಂದ ಕೇಂದ್ರ ಸರ್ಕಾರಕ್ಕೂ ಏನೂ ಮಾಡಲಾಗದಂಥ ಅಸಹಾಯಕ ಸ್ಥಿತಿ ಉಂಟಾಗಿದೆ.
ಪ್ರತಿ ನಿತ್ಯ ಕೇಂದ್ರದಿಂದ ೧೫೫೦ ಮೆದಾವ್ಯಾಟ್ ವಿದ್ಯುತ್ ಪೂರೈಕೆಯಾಗಬೇಕಿದೆ. ಆದೂ ರಾಜ್ಯಕ್ಕೆ ಬರುತ್ತಿರುವುದು ೫೦೦ರಿಂದ ೫೫೦ ಮೆಗಾವ್ಯಾಟ್ ವಿದ್ಯುತ್ ಮಾತ್ರ.
ಅಲ್ಲದೆ, ಬಳ್ಳಾರಿಯಲ್ಲಿ ಹೊಸದಾಗಿ ಆರಂಭವಾಗಿರುವ ಉಷ್ಣ ವಿದ್ಯುತ್ ಸ್ಥಾವರದ ೫೦೦ ಮೆಗಾವ್ಯಾಟ್ ಉತ್ಪಾದನೆ ಪೂರ್ಣ ಸ್ಥಗಿತವಾಗಿದೆ. ತಾಂತ್ರಿಕ ಸಮಸ್ಯೆಗಳಿಂದ ಆ ಘಟಕ ರೋಗಗ್ರಸ್ತವಾಗಿದೆ.
ಜತೆಗೆ, ರಾಯಚೂರು ಧರ್ಮಲ್ ಸ್ಥಾವರದ ೩ ಸ್ಥಾವರಗಳು ಕೆಟ್ಟು ಕೂತಿವೆ. ಹೀಗಾಗಿ ನಮ್ಮ ರಾಜ್ಯದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ೯೦೦ ಮೆಗಾವ್ಯಾಟ್ ಕೊರತೆ ತಲೆದೋರಿದೆ. ಇದ ರಿಂದ ನಗರ ಪ್ರದೇಶಗಳಲ್ಲಿ ವಿದ್ಯುತ್ ಬರ ಉಂಟಾಗಿದೆ. ಇದನ್ನು ನಂಬಿ ಏನು ಮಡಲಾಗದಂಥ ಸ್ಥಿತಿ ನಿರ್ಮಾಣವಾಗಿದೆ.
ಇದರ ನಡುವೆ ರಾಜ್ಯ ಸರ್ಕಾರ ಖಾಸಗಿ ಕಂಪನಿಗಳಿಂದ ೩೦೦ ಮೆಗಾವ್ಯಾಟ್ ವಿದ್ಯುತ್ ಖರೀದಿ ಮಾಡುತ್ತಿದೆ. ಹೀಗಾದರೂ ಅಭಾವ ನೀಗುತ್ತಿಲ್ಲ. ಮತ್ತಷ್ಟು ಖರೀದಿ ಮಾಡುವುದಕ್ಕೆ ಪ್ರಯತ್ನಿಸುತ್ತಿದೆ. ಆದರೆ ಖಾಸಗಿ ಕಂಪನಿಗಳು ದುಬಾರಿ ಬೆಲೆ ಕೇಳುತ್ತಿವೆ. ಅಷ್ಟು ಹಣ ಕೊಡಲು ಸಾಧ್ಯವಿಲ್ಲ ಎಂದು ಸರ್ಕಾರ ಕೈಚೆಲ್ಲಿ ಕೂತಿದೆ. ಒಂದು ವೇಳೆ ಅಷ್ಟು ಹಣ ತೆತ್ತು ವಿದ್ಯುತ್ ತಂದರೆ ಖಜಾನೆ ಖಾಲಿಯಾಗಲಿದೆ.
ಈ ಹಣವನ್ನು ಗ್ರಾಹಕರ ಮೇಲೆ ಹೇರಲು ಸಾಧ್ಯವಿಲ್ಲ. ಗ್ರಾಹಕರು ಕೂಡ ಅಷ್ಟು ದುಬಾರಿ ಹಣ ತೆರಲು ಸಾಧ್ಯವಿಲ್ಲ. ಇದರಿಂದಾಗಿ ಸರ್ಕಾರ ಇಕ್ಕಟ್ಟಿಗೆ ಸಿಲುಕಲಿದೆ.
ಈ ಮಧ್ಯೆ ಬೆಂಗಳೂರು ಕ್ಷಿಹಾ ನಗರ ಪಾಲಿಕೆ ಹಾಗೂ ಪಂಚಾಯತ್ ಚುನಾವಣೆಗಳು ಬರುತ್ತಿವೆ. ರೈತರಿಗೆ ನಾಲ್ಕರಿಂದ ಐದು ಗಂಟೆ ಮೂರು ಫೇಸ್ ವಿದ್ಯುತ್ ಕೊಡಲು ಸಾಧ್ಯವಾಗುತ್ತಿಲ್ಲ. ಪೂರ್ಣ ಬೇಡಿಕೆ ಈಡೇರಿಸಬೇಕಾದರೆ ೩,೫೦೦ ಕೋಟಿ ರೂಪಾಯಿ ಬೇಕಾಗುತ್ತದೆ.
ಇಷ್ಟು ಹಣ ಕೊಡಲು ಸಾಧ್ಯವಿಲ್ಲದಿರುವುದ ರಿಂದ ಇರುವ ವಿದ್ಯುತ್ತಿನಲ್ಲಿಯೇ ಪರಿಸ್ಥಿತಿ ನಿಭಾಯಿಸುವಂತೆ ಸರ್ಕಾರ ಸೂಚಿಸಿದೆ. ಹೀಗಾಗಿ ಬರುವ ಮೇ ವರೆಗೂ ವಿದ್ಯುತ್ ಕ್ಷಾಮ ಮುಂದುವರಿಯಲಿದೆ.
ಕಳೆದ ವರ್ಷದವರೆಗೆ ೧೪೦ರಿಂದ ೧೪೨ ದಶಲಕ್ಷ ಯುನಿಟ್ ವಿದ್ಯುತ್ ಬೇಡಿಕೆ ಇತ್ತು. ಆದೂ ಸರ್ಕಾರ ಖರೀದಿ ಮಾಡಿದರೂ ೧೨೫ರಿಂದ ೧೩೦ ದಶಲಕ್ಷ ಯುನಿಟ್ ಬೇಡಿಕೆಯನ್ನಷ್ಟೇ ಈಡೇರಿಸಿತ್ತು. ಕಾರಣ, ಕಳೆದ ಬಾರಿ ಇದೇ ಸಂದರ್ಭದಲ್ಲಿ ಲೋಕಸಭೆ ಚುನಾವಣೆ ಬಂದಿದ್ದರಿಂದ ೧೫೦೦ ಕೋಟಿ ರೂಪಾಯಿ ತೆತ್ತು ವಿದ್ಯುತ್ ಖರೀದಿ ಮಾಡಿತ್ತು.
ಆದರೆ, ಈ ವರ್ಷ ಅಂತಹ ಯಾವುದೇ ಮಹಾ ಚುನಾವಣೆ ಇಲ್ಲ. ವಿದ್ಯಾರ್ಥಿಗಳ ಪರೀಕ್ಷೆ ತನಗೇನು ಅಗ್ನಿಪರೀಕ್ಷೆಯಲ್ಲ ಎಂದು ಸರ್ಕಾರ ತಾತ್ಸಾರದಿಂದ ವರ್ತಿಸುತ್ತಿದೆ.